ನಿನೆವೆ -
	ಅಸ್ಸಿರಿಯದ ಅತ್ಯಂತ ಜನಭರಿತ ಹಾಗೂ ಅತ್ಯಂತ ಪ್ರಾಚೀನ ನಗರ, ರಾಜಧಾನಿ. ಟೈಗ್ರಿಸ್ ನದಿಯ ಪೂರ್ವತೀರದಲ್ಲಿ ಈಗಿನ ಇರಾಕಿನ ಮೋಸುಲ್ ನಗರಕ್ಕೆ ಎದುರಿನಲ್ಲಿತ್ತು. ನಿನೆವೆ ನಗರದ ಅವಶೇಷಗಳು ಮುಖ್ಯವಾಗಿ ಎರಡು ದಿಬ್ಬಗಳಲ್ಲಿವೆ. ವಾಯವ್ಯದಲ್ಲಿರುವ ಕುಯುಂಜಿಕ್‍ನಲ್ಲಿ ಅರಮನೆ ಹಾಗೂ ದೇವಾಲಯಗಳ ಅವಶೇಷಗಳಿವೆ. ಆಗ್ನೇಯದಲ್ಲಿರುವ ನಬಿ ಯೂನಿಸ್‍ನಲ್ಲಿ ಅಸ್ಸಿರಿಯನ್ ಅರಸರಿಗೆ ಸೇರಿದ ಉಗ್ರಾಣ ಮತ್ತು ಇತರ ಕಟ್ಟಡಗಳ ಹಳೆಯುಳಿಕೆಗಳಿವೆ.ಈ ಎರಡನೆಯ ದಿಬ್ಬ ಜೊನಾ ಎಂಬ ಪ್ರವಾದಿಯ ಸಮಾಧಿಯಿಂದಾಗಿ ಹೆಚ್ಚು ಪ್ರಸಿದ್ಧವಾಗಿವೆ. ಮೊದಲನೆಯ ದಿಬ್ಬದಲ್ಲಿ ಪ್ರಾಗೈತಿಹಾಸಿಕ ಅವಶೇಷUಳೂ ಇವೆ. ನಿನೆವೆ ಕ್ರಿ.ಪೂ. 18ನೆಯ ಶತಮಾನದಲ್ಲಿ 2ನೆಯ ಷಾಂಷೀ ಆದಾದನ ರಾಜಧಾನಿಯಾಯಿತು. ಆದರೆ ಇದು ಹೆಚ್ಚು ಪ್ರಸಿದ್ಧವಾದ್ದು ಸೆನ್ನಾಕೆರಿಬನ (ಕ್ರಿ.ಪೂ. 705-681) ಕಾಲದಲ್ಲಿ. ಈತನ ಅರಮನೆ ಹಾಗೂ ಶಾಸನಗಳು ಇಲ್ಲಿ ದೊರೆತಿವೆ. ಇವುಗಳಿಂದ ಆಗಿನ ದುರ್ಗನಿರ್ಮಾಣ, ಪಟ್ಟಣ ವ್ಯವಸ್ಥೆ, ನೀರಾವರಿ, ಕೃಷಿ ಮುಂತಾದ ಅಂಶಗಳು ತಿಳಿದುಬರುತ್ತವೆ. ಕೊನೆಯ ಅಸ್ಸಿರಿಯನ್ ಅರಸರು ಈ ನಗರವನ್ನು ಮತ್ತಷ್ಟು ವಿಸ್ತರಿಸಿ ಸುವ್ಯವಸ್ಥೆಗೊಳಿಸಿದರು. ಆಷುರ್‍ಬಾನಿಪಾಲನ (ಕ್ರಿ.ಪೂ. 669-626) ಅರಮನೆ ಪುರಾತತ್ವಜ್ಞರ ಹಾಗೂ ಕಲಾಭಿಜ್ಞರ ಆಸಕ್ತಿಯ ಕೇಂದ್ರವಾಗಿದೆ.

	ಕುಯುಂಜಿಕ್ ದಿಬ್ಬವನ್ನು ಸಂಪೂರ್ಣವಾಗಿ ಅಗೆದು ಶೋಧಿಸಿಲ್ಲ. ನೈಋತ್ಯದ ಭಾಗದಲ್ಲಿ ಸೆನ್ನಾಕೆರಿಬನ ಮತ್ತು ಉತ್ತರದಲ್ಲಿ ಆಷುರ್‍ಬಾನಿಪಾಲನ ಅರಮನೆಗಳು ಈಗ ಸಿಕ್ಕಿವೆ. ಸೆನ್ನಾಕೆರಿಬನ ಅರಮನೆ ತುಂಬ ವಿಶಾಲವಾದ್ದು. ಅದು ಕೊನೆಯ ಪಕ್ಷ 80 ವಿಶಾಲವಾದ ಕೋಣೆಗಳನ್ನೊಳಗೊಂಡಿತ್ತು. ಮುಖ್ಯ ದ್ವಾರಗಳಲ್ಲಿ ಮಾನವನ ತಲೆಯುಳ್ಳ ವೃಷಭಮೂರ್ತಿಗಳಿದ್ದವು. ಕಲ್ಲುಚಪ್ಪಡಿಗಳಿಂದ ನಿರ್ಮಿತವಾದ ಗೋಡೆಗಳ ಮೇಲೆ ಅರಸನ ದಿಗ್ವಿಜಯ ಮತ್ತು ಆಸ್ಥಾನಜೀವನಕ್ಕೆ ಸಂಬಂಧಿಸಿದ ಉಬ್ಬು ಚಿತ್ರಗಳನ್ನು ಬಿಡಿಸಿತ್ತು. ಈ ಶಿಲ್ಪಗಳಲ್ಲಿ ಉತ್ತಮವಾದ ಕೆಲವನ್ನು ಈಗ ಬ್ರಿಟಿಷ್ ಮ್ಯೂಸಿಯಮ್ಮಿನಲ್ಲಿಡಲಾಗಿದೆ. ಎರಡು ಅರಮನೆಗಳ ನಡುವೆ ಇಷ್ತರ್, ನಬು ಮುಂತಾದ ದೇವತೆಗಳಿಗೆ ಸೇರಿದ ದೇವಾಲಯಗಳಿವೆ. ಇಲ್ಲಿಯ ಇಷ್ತರ್ ದೇವತೆಯ ಪ್ರಸಿದ್ಧಿ ಈಜಿಪ್ಟಿಗೂ ಹರಡಿತ್ತು. ಸೆನ್ನಾಕೆರಿಬನ ಕಾಲದಲ್ಲಿ ನಿನೆವೆ ನಗರ ಒಟ್ಟು ಸುಮಾರು 1,800 ಎಕರೆಗಳಷ್ಟು ವಿಸ್ತಾರವಾಗಿತ್ತು. ಇದಕ್ಕೆ 18 ಮಹಾದ್ವಾರಗಳಿದ್ದುವಲ್ಲದೆ, ರಕ್ಷಣೆ ಗೋಡೆಗಳಿದ್ದವು. ಬೆಟ್ಟಗುಡ್ಡಗಳಿಂದ ನೀರು 18 ಕಾಲುವೆಗಳ ಮೂಲಕ ನಗರಕ್ಕೆ ಬರುವ ವ್ಯವಸ್ಥೆ ಇತ್ತು. 

	ಕ್ರಿ.ಪೂ. 612ರಲ್ಲಿ ಸಿಯಾಕ್ಸರೀಸನ ನೇತೃತ್ವದಲ್ಲಿ ಬಂದಮೀಡ್ ಜನರ ಆಕ್ರಮಣಗಳಿಗೆ ಈ ಮಹಾನಗರ ತುತ್ತಾಗಿ ನಾಶವಾಯಿತು.

(ಎಚ್.ಎಂ.ಎನ್.ಆರ್;ಎಚ್.ಆರ್.ಆರ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ